ಚಿಟ್ಟೆ ಮೀನು -
	ಆಳವಿಲ್ಲದ ನೀರಿನಲ್ಲಿ ಜೀವಿಸುವ ವರ್ಣರಂಜಿತ ದೇಹದ ಹಲವು ಜಾತಿಯ ಸಮುದ್ರವಾಸಿ ಮೀನುಗಳಿಗೆ ಬಳಸುವ ಒಂದು ಸಾಮಾನ್ಯ ಹೆಸರು (ಬಟರ್ ಫ್ಲೈ ಫಿಷ್). ಆಸ್ಟಿಯೋಗ್ಲಾಸಿಡೀ ಕುಟುಂಬದ ಪ್ಯಾಂಟೊಡಾನ್ ಬುಕ್‍ಹೋಲ್‍ಟ್ಸೈ (ಆಫ್ರಿಕದ ಚಿಟ್ಟೆಮೀನು). ಕೀಟೋಡಾಂಟಿಡೆ ಕುಟುಂಬದ ಕೀಟೊಡಾನ್ ಆರ್ನೇಟಿಸಿಸಮ್ (ವಿದೂಷಕ ಚಿಟ್ಟೆಮೀನು), ಫಾರ್ಸಿಪೈಜರ್ ಲಾಂಜಿರಾಸ್ಟ್ರಿಸ್ (ಉದ್ದ ಮೂತಿಯ ಚಿಟ್ಟೆ ಮೀನು), ಹೆನಿಯೋಕಸ್ (ಇಂಡೊ-ಪೆಸಿಫಿಕ್ ಚಿಟ್ಟೆ ಮೀನು)ಗಳಿಗೆ ಈ ಹೆಸರು ಅನ್ವಯವಾಗುತ್ತದೆ. ಆಫ್ರಿಕದ ಚಿಟ್ಟೆಮೀನು ತುಂಬ ಚಿಕ್ಕದು; ಇದರ ಉದ್ದ 5." ಸಾಮಾನ್ಯವಾಗಿ ನೀರಿನ ಮೇಲ್ಮೈಯ ಕೆಳಗೆ ಚಲಿಸದೆ ತೂಗುತ್ತಿರುವಂತೆ ನಿಂತಿರುತ್ತದೆ. ಆದರೆ ಆಗಾಗ ನೀರಿನಿಂದ 5'—6' ದೂರಕ್ಕೆ ನೆಗೆಯಬಲ್ಲದು. ಇದರಿಂದಾಗಿ ಗಾಜಿನ ತೊಟ್ಟಿಯಲ್ಲಿ ಸಾಕುವಾಗ ತೊಟ್ಟಿಯ ಮೇಲ್ಭಾಗವನ್ನು ಮುಚ್ಚಬೇಕಾಗುತ್ತದೆ. ನೀರಿನ ಮೇಲೆ ವಾಸಿಸುವ ಅಥವಾ ನೀರಿಗೆ ಬಂದು ಬೀಳುವ ಚಿಟ್ಟೆಗಳನ್ನು ಹಿಡಿದು ತಿಂದು ಜೀವಿಸುತ್ತದೆ. ಕೀಟೊಡಾಂಟಿಡೆ ಕುಟುಂಬಕ್ಕೆ ಸೇರಿದ ಚಿಟ್ಟೆ ಮೀನುಗಳು ಉಷ್ಣವಲಯದ ಸಮುದ್ರಗಳ ಹವಳದ ಗೂಡುಗಳಲ್ಲಿ ವಾಸಿಸುತ್ತವೆ. ಎಲ್ಲವೂ ಬಲು ವರ್ಣರಂಜಿತ. ಇವುಗಳ ಬೆನ್ನಿನ, ಬಾಲದ ಮತ್ತು ಗುದದ್ವಾರದ ಬಳಿಯ ರೆಕ್ಕೆಗಳ ಮುಂಭಾಗದಲ್ಲಿ ಅನೇಕ ಮುಳ್ಳುಗಳಿರುತ್ತವೆ. ಈ ಮುಳ್ಳುಗಳ ಮೃದುವಾದ ರೇಖೆಗಳು ಬಾಲದ ರೆಕ್ಕೆಯ ಬಳಿ ದೇಹದ ಸುತ್ತ ಸುತ್ತಿಕೊಳ್ಳುವಂತೆ ಚಾಚಿವೆ. ಎದ್ದು ಕಾಣುವ ಬಣ್ಣಗಳ ಜೊತೆಗೆ ಈ ಮೀನುಗಳ ಮೂತಿ ಉದ್ದವಾಗಿ ಚಾಚಿಕೊಂಡಿರುತ್ತದೆ. ವಿದೂಷಕ ಚಿಟ್ಟೆ ಮೀನು ಪೆಸಿಫಿಕ್ ಸಾಗರದ ಉಷ್ಣಪ್ರದೇಶಗಳಲ್ಲಿ ವಾಸಿಸುತ್ತದೆ. ಅದರ ಮೂತಿ ಮೇಲಕ್ಕೆ ಎದ್ದುಕೊಂಡಂತಿದೆ. ಫಾರ್ಸಿಪೈಜರ್ ಜಾತಿಯ ಮೀನುಗಳ ಮೂತಿ ವಿಪರೀತ ಉದ್ದ. ಇದರ ತುದಿಯಲ್ಲಿ ಮೊನೆಯಾದ ಮೂಗೂ ವಿವಿಧ ರೀತಿಯಲ್ಲಿ ಮಾರ್ಪಟ್ಟಿರುವ ಬಾಯೂ ಉಂಟು. ಕೆಲವು ಚಿಟ್ಟೆ ಮೀನುಗಳ ಹಲ್ಲುಗಳು ಉಳಿಯಂತಿವೆ. ಇವುಗಳ ಸಹಾಯದಿಂದ ಮೀನುಗಳು ಹವಳದ ಚಿವುಟಿಕೊಂಡು ಕಬಳಿಸುತ್ತವೆ. ಲಾಂಜಿ ರಾಸ್ಟ್ರಸ್ ಪ್ರಬೇದದ ಚಿಟ್ಟೆಮೀನು ತನ್ನ ನೀಳವಾದ ಮಾತಿಯ ಸಹಾಯ ದಿಂದ ಹವಳದ ಗೂಡಿನೊಳಕ್ಕೆ ಹೊಕ್ಕಿರುವ ಸಣ್ಣಪುಟ್ಟ ಕಠಿಣಚರ್ಮಿಗಳನ್ನು ಹುಡುಕಿ ತೆಗೆದು ತಿನ್ನುವುದುಂಟು. ಹಿಂದೂ ಮತ್ತು ಪೆಸಿಫಿಕ್ ಸಾಗರಗಳಲ್ಲಿ ವಾಸಿಸುವ ಹೆನಿಯೋಕಸ್ ಜಾತಿಯ ಚಿಟ್ಟೆ ಮೀನುಗಳಲ್ಲಿ ಬೆನ್ನಿನ ಮೇಲಿನ ಒಂದು ಮುಳ್ಳು ನೀಳವಾದ ದಾರದಂತೆ ಮಾರ್ಪಟ್ಟಿರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ